April 02, 2014

ಚುಂಬನದ ಸಿಹಿ..


                                         ನಿನ್ನ ಚುಂಬನದ ಸಿಹಿಯ,           
                                         ನಾ ಹೇಗೆ ಬಣ್ಣಿಸಲಿ?
                                         ಆಧಾರವಿಲ್ಲವಷ್ಟೆ..
                                         ಹೇಳಬೇಕೆಂದರೆ, ನಾನಿರುವೆನು
                                         ಮರುಚುಂಬನದ ಆಸೆಯಲ್ಲಿ,
                                         ಅಧರಾಮೃತದ ನಶೆಯಲ್ಲಿ..

March 29, 2014

ಗುರುತು

ಕಳೆದಿದೆ ನಿನ್ನ ಗುರುತು
ಹುಡುಕಲಾಗದೇ ನೆನಪಲಿ
ಮತ್ತೆ ಮತ್ತೆ ಮರುಕಳಿಸಿತು
ನೆನಪಾಗದ ಈ ಸಮಯದಲಿ

ಕೊಂಚವೂ ಸುಳಿವು ಸಿಗುತಿಲ್ಲ
ನಿನ್ನ ಭೇಟಿಯ ಚಿತ್ರಣ
ಸ್ಥಳವೂ ಅಪರಿಚಿತವಾಗಿಸಿತಲ್ಲ
ಗುರುತು, ಪರಿಚಯದ ಮಿಶ್ರಣ

ನೀ ಬಂದರೆ ಪರಿಚಯ ಸಿಗಬಹುದೇ? ನನಗೆ
ಕಣ್ಣೀರ ಹನಿಯ ಅಳುವಲಿ
ಇಷ್ಟಾದರೂ ತಿಳಿಯಬಹುದೇ? ನಿನಗೆ
ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ

ಹಿಡಿತವಿಲ್ಲದ ಮನ

ಹಿಡಿತವಿಲ್ಲದ ಮನವು
ಪ್ರೀತಿಯ ಅಲೆಯಲ್ಲಿ ತೇಲಿದೆ,
ಎಲ್ಲಿಯೋ ಕೇಳುವ ಪಿಸುಮಾತನು ಅರಸಿ!!

ತೆರೆಯ ಅಲೆಗಳೊಂದಿಗೆ ಹೆಜ್ಜೆ..

ತೆರೆಯ ಅಲೆಗಳೊಂದಿಗೆ, ನಿನ್ನ ಹೆಜ್ಜೆ ಹುಡುಕುತ
ಅಳಿಸುವ ಮೊದಲು ಕಾಲನಿಡಲು, ಈ ಮನದ ಆತುರ
ಸಹಕರಿಸುವೆಯಾ, ಒಂದೇ ಹೆಜ್ಜೆಯನಿಡಲು
ನಿನ್ನ ಕಾಲನು ನನ್ನ ಕಾಲಿನಮೇಲಿಟ್ಟು . . .

March 28, 2014

ಗುರುವೇ..


                                      ಗುರುವೇ,
                                      ನೀ ತೋರಿದಾ ಹಾದಿಯಲಿ ಹೊರಟಿಹೆನು ನಾನು
                                      ಪಥದ ಅರಿವಿಲ್ಲ, ಸೂತ್ರದಾರ ಜೊತೆಗಿಲ್ಲ
                                      ನಿನ್ನ ದಿವ್ಯದೃಷ್ಟಿಯಲ್ಲಿ ನಂಬಿಕೆಯೇ ಎಲ್ಲ
                                      ಮುನ್ನಡೆಸು ನನ್ನ ಬೆಳಕಿನೆಡೆಗೆ..

February 16, 2014

ಓಲೆ

ನಿನ್ನ ಓಲೆಯ ಕದಲುವಿಕೆ
ನನ್ನನ್ನೇ ಕರೆಯುವಂತಿದೆ
ಮಾತಿನ ತಾಳಕ್ಕೆ
ಮೌನದ ಉತ್ತರವಾಗಿ

November 26, 2013

ಪಯಣ

ಕಲ್ಪನೆಗಳೊಂದಿಗೆ, ಕನಸಿನ ಲೋಕದಲ್ಲಿ
ನಾವಿಕನ ಪಯಣ ..
ನಾಯಕಿಯ ಹುಡುಕಾಟದಲ್ಲಿ !!!!

November 18, 2013

ನಗೆಗೆ ನಾಚಿದ್ದು..

ಬಸ್ಸಿನಲ್ಲಿ ಎದುರು ಕುಳಿತ ಹುಡುಗಿಯ ನಗೆಗೆ ನಾಚಿದ್ದು,
ಅನಿಸಿಕೆಯ ಅಲೆಗಳೊಂದಿಗೆ ..!!

ನೋಡಿದರೂ ನೋಡದಂತೆ
ಇತ್ತ ನೋಡುತ್ತಿರುವ ಅವಳು
ನನ್ನ ನೋಡುತ್ತಿರುವಳೇ ..??

ರಸ್ತೆಯ ದಿಬ್ಬದ ಏರಿಳತಕ್ಕೆ
ಬಸ್ಸಿನಲ್ಲಿ ಕುಳಿತ ನೀನು, ತಲೆ ತೂಗುವುದು
ನನ್ನ ಅನಿಸಿಕೆಗಳಿಗೆ ಒಪ್ಪಿಗೆಯೇ ..??

ನಿನ್ನ ತುಟಿಯಲ್ಲಿನ ಮಾತು
ನಾ ನಿಜವಾಗಿಯೂ ಕೇಳದಾದೆ
ನಗುವಿನ ಅಲೆಯೊಂದನ್ನು ಬಿಟ್ಟು..

ನಿನ್ನ ಮುಂಗುರುಳಾದರೂ ನಾನಾಗಬಾರದಿತ್ತೇ
ಮತ್ತೆ ಮತ್ತೆ ನಿನ್ನ ಕೆನ್ನೆಗೆ ಮುದ್ದಿಸಲು..

October 27, 2013

ಭಾವನೆ


ಭಾವನೆಗಳ ಮಾತಿಗೆ
ಬಣ್ಣ ಹಚ್ಚುವ ಆಸೆ
ಅನುದಿನವೂ ನೆನೆದ ಕನಸಿಗೆ..
ಕಣ್ಣ ರೆಪ್ಪೆಗೆ ಹಚ್ಚಿದ ಕಾಡಿಗೆಯಿಂದ
ಬೊಟ್ಟೊಂದನಿಡುವೆಯಾ
ನಮ್ಮೀ ಪ್ರೀತಿಯ ಪುಟದಂಚಲಿ,
ಹೆಜ್ಜೆ ಜೊತೆಯಿಡುವ ಮುನ್ನ!!!!

October 13, 2013

ಪ್ರೀತಿಯ ಸೆಳೆತಕ್ಕೆ ಸಿಕ್ಕಾಗ..,,

    ಅದ್ಯಾವ ಘಳಿಗೆಯಲ್ಲಿ ಪರಿಚಯವಾದೆಯೋ..??
    ಆ ಪರಿಚಯ ಇಂದು ಏಕಮುಖ ಪ್ರೀತಿಯಾಗಿದೆ..!!

    ಹೌದು, ನೀನು ಸಿಕ್ಕಾಗ ನನಗೆ ಕೇವಲ ಪರಿಚಿತಳಾಗಿದ್ದೆ. ನಿನ್ನ ನಗುವೊಂದನ್ನು ನಾನು ಕೇವಲ ಬಯಸಿದ್ದೆ. ನನ್ನ ಗುಣ ನನಗೆ ಹೊಸತಲ್ಲ. ಪರಿಚಯವಾದ ಹುಡುಗಿಯ ಮುಖದಲ್ಲಿ ನಗು ಮೂಡಿಸಿ, ನಾನೂ ನಗುವುದು ನನ್ನ ಅಭ್ಯಾಸ. ಇದು ನನ್ನ ಬಲಹೀನತೆಯಲ್ಲ. ದಯವಿಟ್ಟು ಹಂಗಿಸಿ ನಗಬೇಡ, ಆ ನಗುವನ್ನು ಎಂದಿಗೂ ನಾನು ಬಯಸಿಲ್ಲ. ನಿನ್ನ ಗುಣವನ್ನು ನಾನು ಎಷ್ಟೇ ಅರಿಯಲಿಚ್ಚಿಸಿದರೂ, ಇನ್ನೂ ಅರಿಯಲಾಗಲಿಲ್ಲ. ಅದ್ಯಾಕೋ ನಿನ್ನ ಜೊತೆಯಲ್ಲಿರುವಷ್ಟು ಸಮಯ ನನ್ನ ಮನಸ್ಸು ಶುಭ್ರವಾಗಿರುತ್ತದೆ. ಏನೆಲ್ಲ ಮಾತಾಡಬೇಕೆಂದು ಬರುವೆ, ಆದರೆ ನಿನ್ನ ನೋಡಿದಾಕ್ಷಣ ಕೇವಲ ನಗೆಯಲ್ಲಿನ ಮಾತು ಎಲ್ಲವನ್ನೂ ಮರೆಸಿಬಿಡುತ್ತದೆ. ನಿನ್ನ ಮಾತಿಗೆ ಕೇವಲ ಪ್ರತ್ಯುತ್ತರಗಾರನಾಗಿರುತ್ತೇನೆ ಏಕೋ ತಿಳಿಯೆ. ನನಗನ್ನಿಸಿದ ಹಾಗೆ ಇದು ಪ್ರೀತಿಯಲ್ಲ. ಆದರೆ ಇದು ಆಕರ್ಷಣೆಗಿಂತ ಮಿಗಿಲು. ಒಂದು ತರದಲ್ಲಿ ಪ್ರೀತಿಯೇ ಅಂದಿಟ್ಟುಕೊಳ್ಳೋಣ. ನೀನು ನಿಜವಾಗಿಯೂ ಯಾವ ಬದಲಾವಣೆಯನ್ನೂ ಕಂಡಿಲ್ಲವಾ ನನ್ನಲ್ಲಿ?
    ನೀನು ಸಿಕ್ಕ ಆ ದಿನ ಒಂದು ಮಾತಿನಲ್ಲಿ ಮುಗಿಸಿದ್ದೆ ನಿನ್ನ ಹೆಸರು ಕೇಳಿ. ನೆನಪಿಲ್ಲವಾ ನಿನಗೆ ? ನನ್ನ ಹೆಸರನ್ನು ಹೇಳಿರಲಿಲ್ಲ. ನೀನು ಕೇಳಿದ್ದು ಇನ್ನೊಂದು ಭೇಟಿಯಲ್ಲಿ. ಮಾತು ಶುರುವಾಗಿದ್ದೇ ಹಾಗೆ!! ಹೀಗೆ ಪ್ರಾರಂಭವಾದ ಮಾತು ಇಂದು ನಮ್ಮನ್ನು ಇಷ್ಟು ಸಮೀಪ ಬರುವಂತೆ ಮಾಡಿದೆ. ಅಂದು ನಾನಾಗಿಯೇ ನಿನ್ನನ್ನು ಮಾತನಾಡಿಸಿದ್ದಕ್ಕೆ ಇಂದು ಈ ಸ್ನೇಹ ಸಾಧ್ಯವಾಯಿತು. ಅಂದು ನಿನ್ನ ಭೇಟಿಯೇ ವಿಚಿತ್ರ.  ಈಗ ದಿನವೂ ನಿನ್ನ ಬಳಿ ಮಾತನಾಡಬಯಸುತ್ತೇನೆ. ಆದರೆ ನೀನಿಲ್ಲ ಜೊತೆಯಲ್ಲಿ. ಜೊತೆಯಲ್ಲಿ ಸಿಕ್ಕ ಕೆಲವು ನಿಮಿಷ ಕಳೆದಿದ್ದೇ ತಿಳಿಯದು. ನಿನಗಿದೆಲ್ಲ ತಿಳಿದಿದ್ದರೆ, ಈ ಕಥೆಯ ಧಾಟಿಯಲ್ಲಿಯೇ ನನ್ನ ಪ್ರೀತಿಯ ಭಾವನೆಗಳನ್ನು ಅರಿತುಬಿಡುತ್ತೀಯಾ.
    ನಿನ್ನ ಸನಿಹ ಕೇವಲ ಕ್ಷಣಿಕವಾದರೂ, ದಿನವೂ ಅದನ್ನೇ ಬಯಸುತ್ತೇನೆ. ಇತ್ತೀಚಿನ ದಿನದ ನಿನ್ನ ಭಾವನೆಗಳು, ನೀನೂ ನನಗೆ ತಿಳಿಯದ ಹಾಗೆ ನನ್ನನ್ನೇ ಪ್ರೀತಿಸುತ್ತೀಯ ಅನ್ನಿಸುವಂತೆ ಮಾಡಿದೆ. ಆದರೆ ನೀನು ಅದನ್ನು ಎಂದೂ ತೋರ್ಪಡಿಸಲಿಲ್ಲ. ನಿನ್ನ ನಾಚಿಕೆಯ ಸ್ವಭಾವದಲ್ಲಿ, ಅದೆಷ್ಟೋ ಗುಣಗಳು ನನ್ನ ಭಾವನೆಗೆಳಿಗೆ ಸರಿಹೊಂದುತ್ತದೆ. ನಾನೂ ಅದನ್ನೇ ಬಯಸಿದ್ದು. ನೀನು ಸ್ವಲ್ಪವೂ ಇದನ್ನು ಗಮನಿಸಿಲ್ಲವಾ ಅಥವಾ ಇದೆಲ್ಲ ಹುಡುಗರ ಪರೀಕ್ಷೆಯ ಅಸ್ತ್ರವೋ. ನನ್ನನ್ನು ಜಾಸ್ತಿ ಕಾಡಬೇಡ. ನಿನಗೆ ನನ್ನ ತಾಳ್ಮೆಯ ಬಗೆಗಿನ ನಂಬಿಕೆ ಹೊರಟು ಹೋದರೆ ಕಷ್ಟ. ನೀನು ಸನಿಹ ಕೂತು ಹರಟುವ ಆ ಸಮಯ ಹೊಸ ಜಗತ್ತನ್ನು ಪರಿಚಯಿಸಿದಂತೆ. ಆದೆರೆ ನೀನು ಹೋದರೆ, ಇಡೀ ಪ್ರಪಂಚದಲ್ಲಿ ನಾನೊಬ್ಬನೇ ಅನಿಸುತ್ತದೆ....ಏಕಾಂಗಿ....!!!!
    ನಾನು ಒಬ್ಬಂಟಿಗನೆಂದು ನಿನ್ನ ಮನಸ್ಸನ್ನು ಬಯಸಿಲ್ಲ. ನಮ್ಮಿಬ್ಬರ ಹೃದಯವನ್ನು ವಿಭಾಗಿಸಿ, ಒಂದನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಬಯಕೆ. ನಾನೋ, ನನ್ನ ಹೃದಯವನ್ನು ವಿಭಾಗಿಸಿ, ಒಂದು ಭಾಗದ ನನ್ನ ಮನಸ್ಸಿನಲ್ಲಿ ಹುಟ್ಟುವ ಪ್ರೀತಿ-ಭಾವನೆಗಳಿಗೆ ನಿನ್ನ ಮನಸ್ಸು ಯೋಚಿಸಬಹುದಾದಂತಹ ಭಾವನೆಗಳನ್ನು ಕಲ್ಪಿಸಿಕೊಳ್ಳುತ್ತೇನೆ. ಅದೇ ಭಾವನೆ ನೀನೂ ತೋರ್ಪಡಿಸಿದರೆ, ನನ್ನ ಹೃದಯಕ್ಕೆ ಜೀವ.  ತಪ್ಪಿದಲ್ಲಿ ನನ್ನ ಮನಸ್ಸು ಇಬ್ಭಾಗ. ಅದು ನಿನಗೆ ಎಂದಿಗೂ ತಿಳಿಯದಂತೆ ಇರಬೇಡ. ನಿನ್ನ ನೆನಪಿನಲ್ಲಿ ಹುಚ್ಚನಾಗಲು ಎಂದಿಗೂ ಬಯಸಿಲ್ಲ. ಸಮೀಪವಿಲ್ಲದಿದ್ದರೂ, ಪರಿಚಿತಳಾಗಿ, ಸ್ನೇಹಿತೆಯಾಗಿದ್ದುಬಿಡು.
    ಅದೆಷ್ಟೋ ಸಲ ನೀನು ನನ್ನ ಬಳಿ ಬಂದಾಗ, ನಿನ್ನ ಅಪರಿಚಿತ ಮಂದಹಾಸವನ್ನು ಗಮನಿಸಿದ್ದೇನೆ. ಆದರೆ ಆ ಭಾವನೆಗಳನ್ನು ತಿಳಿಯಲು ಅಶಕ್ಯನಾಗಿದ್ದೇನೆ. ನೀನೂ ಇದನ್ನೇ ಹೇಳಲು ಹೊರಟರೆ, ನನಗೂ ಖುಷಿ. ನಿನ್ನ ಭಾವನೆಗಳಿಗೆ ವಿರುದ್ಧವಾಗಿ ಎಂದೂ ನಾನು ಆಹ್ವಾನಿಸಿಲ್ಲ. ಕಲ್ಪನೆಯ ಸೌಧವನ್ನು ಕಟ್ಟಲು ಶಕ್ಯನೇ ವಿನ: ಪ್ರೇಮ ಸೌಧವನ್ನಲ್ಲ. ಇಬ್ಬರೂ ಸೇರಿ ಕಟ್ಟಲು ನೀ ಸಹಕರಿಸಿದರೆ, ನನ್ನಷ್ಟು ಸಂತೋಷಪಡುವವರಿಲ್ಲ.
    ನಿನಗೆ ಅರ್ಧೈಸಲು, ನೀನು ಸನಿಹ ಬಂದಾಗ ಹೇಳುವ ಕೇವಲ ನಾಲ್ಕು ಮಾತುಗಳಷ್ಟೇ ಸಮಯವಿದೆ. ಆದರೆ ನಿನ್ನ ನಗುವಿನ ಮೋಡಿ, ನನ್ನ ಮೌನಿಯಾಗಿಸುವುದಂತೂ ಖಚಿತ. ಹುಡುಗನಾಗಿ ತಿಳಿಮನಸ್ಸಿನಿಂದ ಪ್ರೀತಿ ನಿವೇದಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಪ್ರೀತಿಸುವ ಮನಸ್ಸನ್ನು ನೀನು ಖಂಡಿತವಾಗಿಯೂ ಪ್ರೀತಿಸುತ್ತೀಯಾ ಎಂದುಕೊಂಡಿರುವೆ. ಹೋಗಲು ಹಲವಾರು ದಾರಿಗಳಿದ್ದರೂ, ಪ್ರೀತಿಸಲು ಒಂದೇ ದಾರಿಯಲ್ಲಿ ಹೋಗಬಯಸುವವನು ನಾನು. ಪ್ರೀತಿಸುವುದೂ ನಿನ್ನನ್ನೇ.  ಭಾವನೆಗಳಿರದ ಮನಸ್ಸಿನಿಂದ ಬಂದು ನನ್ನನ್ನು ಮಾತನಾಡಿಸಬೇಡ. ಮುಂದಿನ ಭೇಟಿಯ ತನಕ ಕಾಯುವ ತಾಳ್ಮೆ ಖಂಡಿತವಾಗಿಯೂ ಇಲ್ಲ.
    ಮನಸಾರೆಯಾಗಿ ಆಹ್ವಾನಿಸಿದ್ದೇನೆ....ಪ್ರೀತಿಸುವ ಮನಸ್ಸಿನೊಂದಿಗೆ ಬಾ....

ಇಂತಿ ನಿನ್ನ ಪ್ರೀತಿಯ,
ನಿನ್ನ ಪ್ರಿಯಕರ.

October 05, 2013

ಬದುಕು

ಬದುಕು, ನೀರ ಮೇಲಿನ ದೋಣಿಯಂತೆ
ಹುಟ್ಟು ಹಾಕುವವನ ರಟ್ಟೆ ಗಟ್ಟಿಗಿರಬೇಕಷ್ಟೆ!!!!

September 21, 2013

ಪಾರಿಜಾತಾ...

ದಾರಿಯಲೊಮ್ಮೆ, ಒಮ್ಮೆ
ದಾರಿಯಲೊಮ್ಮೆ ಸಿಕ್ಕಿಬಿಟ್ಲು ಜಾತಾ
ಜಾತ ಪಾರಿಜಾತಾ !
ನಿನ್ನ ಹೂವನಡಿಗೆ, ನಡಿಗೆ
ನಿನ್ನ ಹೂವನಡಿಗೆಯಿಂದೇ
ಹೃದಯ ಘಾತ
ಜಾತ ಪಾರಿಜಾತಾ !

ವಯಸಿನಿಂದ ಬಂದೆ
ಮನಸು ಮಾತ್ರ ನಂದೆ
ಮನಸು ಕೊಡಲೆಂದೇ
ನಿನಮನೆ ಬಳಿಬಂದೆ
ನಿನ್ನ ಮನಸು ಕೊಟ್ಟುಹೋಗೆ ಜಾತಾ,
ಜಾತ ಪಾರಿಜಾತಾ !

ಮೈಸೂರ್ ಮಲ್ಲಿಗೆ ತಂದೆ
ಸೆಂಟು ಗಿಂಟು ನಿಂದೆ
Colour ಚೂಡಿದಾರ ಒಂದೇ
ಹಾಕ್ಕೊಂಬಿಡು ಬಂದೆ
ದುಡ್ಡು ಗಿಡ್ಡು ಕಟ್ಕೊಂಬಾರೆ ಜಾತಾ,
ಜಾತ ಪಾರಿಜಾತಾ !

ಕಲರ್ TV ತಂದೆ
ಕಲರ್ Filmi ಗೆಂದೇ
ವರ್ಷ ಪೂರ್ತಿ ಬಂದೆ
ನಿನಗೋಸ್ಕರ ಹಿಂದೇ
ಹಳೆ ಚಪ್ಲೀಲ್ ಹೊಡಿಬೇಡ ಜಾತಾ,
ಜಾತ ಪಾರಿಜಾತಾ !

September 18, 2013

ಪ್ರೀತಿ ವಂಚಿತ

ಪ್ರೀತಿಸುವ ಘಳಿಗೆಯಲಿ
ಪ್ರೀತಿಯ ಪ್ರತ್ಯುತ್ತರಕ್ಕಾಗಿ ಕಾಯುವುದು
ಪ್ರೀತಿಯ ಸಾಗರ ಈಜಿದಂತೆಂದ..........ಪ್ರೀತಿ ವಂಚಿತ.

ಪ್ರಜ್ವಲನಾದೆ ನಾ

ಪರಿ-ಪರಿಯಾಗಿ ಕೇಳಿದರೂ
ಪರಿಗಣಿಸಲಿಲ್ಲ ನೀ, ನನ್ನ ಪ್ರೀತಿ
ಪ್ರಜ್ವಲನಾದೆ ನಾ......
ಪ್ರೀತಿ ಬಿಟ್ಟ ತರುವಾಯ..!!??

ಕಣ್ಣೀರ ಹನಿ

ಮರೆತೆ ಮಾತೊಂದ ಹೇಳುವುದು ನೀನು ಸಿಕ್ಕಾಗ
ಕಣ್ಣೀರ ಸುಳಿವು, ಬಾಡಿದ ಮುಖದಲ್ಲಿ
ಇನ್ನೂ ಬಳಿಬಂದು ಹೇಳುವ ಅಭಿಲಾಷೆ
ಭಯವೋ....??
ನಂಬಿಕೆ....!! ನೀನು ತಿರಸ್ಕರಿಸಳಾರೆ.
ಮಾತಿಗಾದರೂ ಸಿಗು ಎಂದೆಂದೂ
ಬಹುದೂರದ ಪಯಣದಿ.
ನೀನಾರೋ..??
ಗೆಳತಿಯೋ..?? ಪ್ರೇಯಸಿಯೋ..??
ಗೊತ್ತಿಲ್ಲ ನಿನ್ನ ಇರುವಿಕೆ ಮನಕೆ
ಆದರೂ, ಮನ ಕದಲಿದೆ.
ಕಣ್ಣೀರ ಹನಿಯೋ....,,
ಬರೆದ ಅಕ್ಷರಗಳ ನಡುವೆ....

ಸನಿಹ ಬಯಸಿ

ದುಃಖಿತನಾಗಿ ಬಂದೆ
ನಿನ್ನ ಸನಿಹ ಬಯಸಿ,
ಸಂತೈಸುವಿಯೆಂದು

ನಿನ್ನ ಸನಿಹವೋ..??
ಉಲ್ಬಣಿಸಿತು ದುಃಖ
ನೀ ಅರಿಯಲಾರಳೆಂದು.

ಬಂಧನದ ನಡುವೆ ಬಿರುಕಿನ ಸೂಚನೆ
ನಾ ತಿರಸ್ಕರಿಸಲೇ..??
ಉಸಿರು ಚಲಿಸದು ಮುಂದೆ
ನೀ ಅರಿತು ಅಪ್ಪುವೆಯಾ..??

ಪ್ರೀತಿ..!!

ಪ್ರೀತಿ ಹೇಳಲು ತುಡಿಯುವ ಮನಸ್ಸಿಗೆ ಪದಗಳಿಲ್ಲ ಗೆಳತಿ,
ಕಣ್ಣ ಸನ್ನೆಯ ಹೊರತಾಗಿ..
ನಿನ್ನ ಕಣ್ಣಂಚಿನ ಪ್ರಭೆಯೋ,
ಕರಗಿ ಹೋಗಿರುವೆ ಮನಸಾರೆ..
ಸಮ್ಮತಿಸು ಮನಸಿಗೆ
ನಿನ್ನ ಕಣ್ಣ ರೆಪ್ಪೆಯ ಬಡಿದು..!!!!

June 26, 2013

|| ಹರ ಹರ ಕೇದಾರನಾಥ ||

ಮಸಣವೊಂದು ಊರ ನಡುವೆ
ಶಿವನ ನೆಲೆಯೂ,
ದೈವ ಕೃಪೆಯಿದ್ದಂತೆ

ಶಿವನಿಚ್ಛೆಯೋ....????
ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ
ಭಕ್ತರ ಸಲಹುವಲಿ

ಶಿವನರಸಿಹೊರಟು ಧ್ಯಾನದಲಿರುವಾಗ
ಮುಕ್ಕಣ್ಣ ತೆರೆದು, ಜಗವ
ಮಸಣವ ಮಾಡಿದೆ ನೀನು
ಹರ ಹರ ಕೇದಾರನಾಥ

October 15, 2012

ಮೌನ..??

ನೀರವ ಮೌನವೋ
ಈ ಜಗ ಬರಿದಾಗಿ
ಕವಿಯಿತೋ ಕಾರ್ಮೋಡ..
ಬತ್ತಿದ ಬಾನಲಿ
ಹನಿಯ ಉಗಮ
ಭೂ ಕಾವಿನ ಆವಿಯಲಿ

ಖಗ ಮೃಗ ಜಲ-ಚರ

ಬದುಕಿನ ಓಟದಿ
ಉದರ ಧಗೆಯಲ್ಲೀ..
ಮನುಜನ ವಾಸವೋ
ನೆತ್ತರು ಬರಿದಾಗಿ
ಸುಡು ನೆತ್ತಿಯ ನೆರಳಲ್ಲಿ

ನಗುವೋ ಅಳುವೋ

ಹೊತ್ತಿದ ದಾಹದಿ
ಕರುಳಿಗೆ ಸಾಂತ್ವಾನ..
ಈ ಜನ-ಮನದಲಿ
ವಿಧಿಯ ನೆರಳಲಿ,
ಬಾಳು ನರಕವು
ಭೂ ತಾಯಿಯ ಮಡಿಲಲ್ಲಿ.

October 05, 2012

ಮಾಸಿದ ನಗೆಯು..

ಮಾಸಿದ ನಗೆಯು
ಕಣ್ಣಿನಾಳದ ಕಡು ಕಲ್ಲಿನಡಿಯಲ್ಲಿ
ಬತ್ತಿದ ಜಲತೀರದ ಮರಳ ಧಗೆಯಲ್ಲಿ
ಉರಿದುರಿದು ಕೆಂಪಾಗಿ
ಇಳಿ ಸಂಜೆಯ ತಿಳಿ ನೆರಳಿನಲ್ಲಿ
ಕಾರ್ಮೋಡ ಎಬ್ಬಿಸಿತು
ಮುಖ ಚಂದಿರದಲ್ಲಿ...

August 24, 2012

ಮನಸು..

ಹುಚ್ಚು ಕುದುರೆಯಂತಹ ಮನಸ್ಸು.  ಭಾವನೆಗಳಿಗೆ ನಿಖರತೆಯಿಲ್ಲ.  ತನಗಾಗಿ ಹಂಬಲಿಸುವ ಮನಸ್ಸಿನ ಹುಡುಕಾಟದಲಿ ಅಲೆಯುತ್ತಿದೆ...,  ಅಲೆದು ಸೋಲುತ್ತಿದೆ...!!??

 

ಹುಚ್ಚು ಮನಸು, ನೂರು ಕನಸು. ಅಲೆದಾಟವೊಂದೇ..!
ದಾರಿ ಗೊತ್ತಿಲ್ಲ, ಗುರಿ ಇಟ್ಟಿಲ್ಲ. ಪರ್ಯಟನೆಯೊಂದೇ..!
ಮಾತನಾಡಿಲ್ಲ, ಮನಸು ಸಿಕ್ಕಿಲ್ಲ. ಮೌನವೊಂದೇ..!
ಪರಿಚಯವಿಲ್ಲ, ಸ್ನೇಹವಿಲ್ಲ. ಹುಡುಕಾಟವೊಂದೇ..!!

August 14, 2012

ಶುಭಾಷಯ....


ನೀ..

ನೀ ಕಾಣದಾದೆ ಇಂದು
ಮನವೆಲ್ಲ ಕಾದಿದೆ.
ನೀ ದೂರ ಹೋದೆಯೆಂದು
ಮನದಲ್ಲಿ ನೋವಿದೆ.
ಈ ಮನಸಿನಾ ನೋವು
ನೀ ತಿಳಿಯದಾದೆಯಾ ? ಗೆಳತಿ,
ಮನವೇಕೆ ಕೊಟ್ಟೆ ನೀನು
ಈ ಪ್ರೀತಿ ಚಿಗುರಲು ...??

June 16, 2012

" ಯಾವ ಘಳಿಗೆಯು ನನ್ನ ಮನಸ್ಸನ್ನು ಮುದಗೊಳಿಸುತ್ತದೆಯೋ,
ಆ ಸಮಯವೇ ನನಗೆ ಸ್ಪೂರ್ತಿ..!
ಯಾವ ಘಳಿಗೆಯು ನನ್ನ ಕಷ್ಟಗಳನ್ನು ಎದುರಿಸುತ್ತದೆಯೋ,
ಆ ಸಮಯವೇ ನನಗೆ ಗುರು..!
ಯಾವ ಘಳಿಗೆಯು ಇನ್ನೊಬ್ಬರ ಸಜ್ಜನಿಕೆಯನ್ನು ತಿಳಿಸುತ್ತದೆಯೋ,
ಆ ಸಮಯವೇ ನನಗೆ ಪಾಠ..!
ಯಾವ ಘಳಿಗೆಯು ಇನ್ನೊಂದು ಮನಸ್ಸಿನ ಭಾವನೆಗಳಿಗೆ ಸ್ಪಂದಿಸಲು ಸಹಕರಿಸುತ್ತದೋ,
ಆ ಸಮಯವೇ ನನಗೆ ಧ್ಯಾನ..!
ಯಾವ ಘಳಿಗೆಯು ನನ್ನವರನ್ನು ನೆನೆಯಲು ಸಹಕರಿಸುತ್ತದೋ,
ಆ ಸಮಯವೇ ನನಗೆ ನೆಮ್ಮದಿ..!
ಯಾವ ಘಳಿಗೆಯು ನನ್ನ ಕಷ್ಟಗಳಿಗೆ ಸ್ಪಂದಿಸುತ್ತದೆಯೋ,
ಆ ಸಮಯವೇ ನನಗೆ ವಿಶ್ರಾಂತಿ..! "

May 30, 2012

ಯೇನೆಂದು ವರ್ಣಿಸಲಿ ನಿನ್ನ....!!!!

* My Lyric for The Music " ಯೇನೆಂದು ಹೆಸರಿಡಲಿ........ ". A song from the Movie " ಅಣ್ಣಾ ಬಾಂಡ್ ".