December 30, 2010

ತಾಯಿಯ ಕರುಳ ಕಥೆ..


          ಆ ದಿನ ದೀಪಾವಳಿ. ನೆರೆ-ಹೊರೆಯವರೆಲ್ಲ ತಮ್ಮ ತಮ್ಮ ಮಕ್ಕಳ ಜೊತೆ ದೀಪಾವಳಿಯನ್ನು ಸಂಭ್ರಮಿಸುತ್ತಿದ್ದಾರೆ. ಆ ಲಗು-ಬಗೆ, ತಾನೇ ಎಲ್ಲ ಕೆಲಸ ಮಾಡಬೇಕೆಂಬ ಕಿತ್ತಾಟ, ಆ ಕಿತ್ತಾಟದೊಳಗಿನ ಚಿಕ್ಕ ಸಂತೋಷ ಇವನ್ನೆಲ್ಲ ನೋಡುತ್ತ ಅದೆಷ್ಟೋ ದೀಪಾವಳಿಯನ್ನು ಕಳೆದಿದ್ದಳು ಸರೋಜ. ತನ್ನ ಮಗನೊಂದಿಗೆ ಯಾವತ್ತು ಈ ರೀತಿ ಸಂಭ್ರಮಿಸುತ್ತೇನೋ ಎಂದು ಹಂಬಲಿಸಿ, ಆ ಸಂತೋಷದ ದಿನಕ್ಕಾಗಿ ಕಾಯುತ್ತ ಕುಳಿತಿದ್ದಳು. ತನ್ನ ಮಗ ಪಟ್ಟಣಕ್ಕೆ ಓದಲು ಹೋದವನು ಈ ಬಡ ತಂದೆ-ತಾಯಿಯನ್ನು ಮರೆತು ಹೋದುದನ್ನು ಮತ್ತೆ ಮತ್ತೆ ನೆನೆಸಿಕೊಳ್ಳುತ್ತ ತನ್ನಲ್ಲೇ ದುಃಖಿಸುತ್ತಿದ್ದಳು.

          ದಿನ ಕಳೆಯುವುದರೊಳಗೆ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಸರೋಜಳು ಕಲ್ಲೂ ಸಹ ಕರಗುವಂತೆ ರೋದಿಸತೊಡಗಿದಳು. ಅವಳ ಅಳುವಿಗೆ ಕೊನೆಯೇ ಇಲ್ಲದಂತೆ ಕಾಣುತ್ತಿತ್ತು. ತನ್ನ ಸರ್ವಸ್ವವನ್ನೂ ಕಳೆದುಕೊಂಡೆನೆಂದು ಚೀತ್ಕರಿಸುತ್ತಿದ್ದಳು. ತನ್ನ ಮಗನು ಈ ಸಮಯದಲ್ಲಾದರೂ ಬಂದಿದ್ದರೆ ತಂದೆಯ ಅಂತ್ಯಸಂಸ್ಕಾರ ಮಾಡಬಹುದಿತ್ತೆಂದು ಅವನ ದಾರಿಯನ್ನೇ ಕಾಯುತ್ತಾ ಗೋಗರೆಯುತ್ತಿದ್ದಳು. ನೆರೆಹೊರೆಯವರು ಎಷ್ಟೇ ಸಮಾಧಾನಿಸಿದರೂ ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಊರಿನವರೇ ಸೇರಿ ಎಲ್ಲ ಮುಗಿಸಿದುದನ್ನು ನೋಡಿ ಆಕಾಶವೇ ತಲೆ ಮೇಲೆ ಬಿದ್ದಂತೆ ಮಂಕಾಗಿ, ಏಕಾಂಗಿಯಾಗಿ ಕುಳಿತುಬಿಟ್ಟಳು.

          ಒಂದು ಬಡ ಕುಟುಂಬದ ಕಣ್ಣೀರ ಕಥೆ. ಸರೋಜ ಮತ್ತು ಅವಳ ಗಂಡ ಇಬ್ಬರೂ ಕೂಲಿಕಾರರು. ತಮ್ಮ ಕೂಲಿಯಿಂದ ದಿನದ ಊಟಕ್ಕೆ ತೊಂದರೆಯಾಗದಂತೆ ದಿನದೂಡುತ್ತಿದ್ದರು. ಇದರ ಜೊತೆ ಮಗನ ಉತ್ತಮ ವಿದ್ಯಾಭ್ಯಾಸಕ್ಕಾಗಿ ಉಳಿದ ಅಲ್ಪ-ಸ್ವಲ್ಪ ಹಣವನ್ನೂ  ಕೂಡಿಟ್ಟಿದ್ದರು. ಮಗನ ಓದಿನೊಂದಿಗೆ ತಮ್ಮ ಬಾಳೂ ಹಸನಾಗುವುದೆಂಬ ಕನಸು ಒಂದೆಡೆ.

          ತನ್ನ PUC ತನಕದ ಓದನ್ನು ಮನೆಯಿಂದಲೇ ಮುಗಿಸಿದ ಸಂದೀಪನು ತನ್ನ ತಂದೆ-ತಾಯಿಯೊಂದಿಗೆ ಸುಖವಾಗಿದ್ದನು. ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದ ಸಂದೀಪನು ತನ್ನ ಸುತ್ತಮುತ್ತಲಿನ ಜನರ ಜೊತೆ ಖುಷಿಯಿಂದಲೇ ಹರಟುತ್ತಿದ್ದನು. ಒಂದು ದಿನ ಊರಿನ ಯಾರೊಬ್ಬರೋ ಮಾತನಾಡಿಕೊಳ್ಳುತ್ತಿರುವುದು ಈತನಿಗೆ ಕೇಳಿಸಿತು. Engineering ಓದಿದರೆ ಕೈತುಂಬ ಹಣ ಸಂಪಾದಿಸಬಹುದು. ಜೀವನವನ್ನು ಯಾವುದೇ ಕೊರತೆಯಿಲ್ಲದೇ ನಿಭಾಯಿಸಬಹುದು ಎಂದು. ಈತನಿಗಾದರೋ ಒಂದು ರೀತಿಯ ಆಸೆ. ಬಡತನದಲ್ಲಿ ಕಳೆದ ದಿನಗಳನ್ನು ನೆನೆಸಿಕೊಂಡನು. ಹುಚ್ಚು ಕುದೆರೆಯಂತೆ ತನ್ನ ಮನಸ್ಸಿನ ಆಸೆಯನ್ನು ಹರಿಯಬಿಟ್ಟನು. ಅದರಂತೆ ತನ್ನ ತಂದೆಗೆ ತಿಳಿಸಿ ತಾನು Engineer  ಆಗಬೇಕೆಂಬುದನ್ನು ತಿಳಿಸಿದನು. ತಂದೆ ಅಷ್ಟೊಂದು ಅನುಕೂಲತೆಗಳನ್ನು ಹೊಂದಿರದಿದ್ದರೂ, ಮಗನ ಓದಿಗೆ ಯಾವುದೂ ಕೊರತೆಯಾಗಬಾರದೆಂದು ನಿರ್ಧರಿಸಿ ಮುಂದೆ ಮಗನೊಂದಿಗೆ ಸುಖವಾಗಿ ಬದುಕಬಹುದೆಂಬ ಎಲ್ಲೋ ಒಂದು ಚಿಕ್ಕ ಆಸೆಯಿಂದ ಸಾಲವನ್ನು ಮಾಡಿ ಪಟ್ಟಣದ ಪ್ರತಿಷ್ಟಿತ College  ಒಂದರಲ್ಲಿ  Engineering ಪ್ರವೇಶ ಕೊಡಿಸಿದನು. ಅಪ್ಪನ ಈ ಸಂತೋಷಕ್ಕೆ ಪಾರವೇ ಇರಲಿಲ್ಲ. ಜೊತೆಗೆ ತನ್ನ ಮಗ ತಮ್ಮನ್ನು ಬಿಟ್ಟು ದೂರದ ಪಟ್ಟಣಕ್ಕೆ ಹೋಗುತ್ತಿದ್ದಾನೆಂಬ ದುಃಖ ಒಂದೆಡೆ. ಅದೆಲ್ಲವನ್ನೂ ಮರೆತು ಮಗನನ್ನು ಕಳುಹಿಸಿಕೊಟ್ಟನು. ಅವನ ಈ ಸಂತೋಷ ಬಹಳ ದಿನಗಳ ತನಕ ಉಳಿಯಲಿಲ್ಲ. ತನ್ನ ಮಗನ City Life ನೋಡಿದ ತಂದೆಗೆ ದುಃಖ ಉಲ್ಬಣಿಸಿ ನಾನೇಕೆ ಈ ರೀತಿ ತಪ್ಪು ಮಾಡಿದೆನು ಎಂದು ಕೊರಗಿದನು. 

          ಸಂದೀಪನು ಪಟ್ಟಣದಲ್ಲಿ ತನ್ನ ಗೆಳೆಯರ ಜೊತೆ ಎಲ್ಲ ದುಷ್ಟ ಚಟಗಳನ್ನು  ಕಲಿತುಕೊಂಡನು. ಅವರ ಜೊತೆಯಲ್ಲಿ Pub, Bar  ಹೀಗೆ ಅವನು ಸುತ್ತದ ಜಾಗವಿರಲಿಲ್ಲ. ಮೋಜು-ಮಸ್ತಿಯಲ್ಲಿಯೇ ಕಾಲಕಳೆದನು. ಹುಡುಗಿಯರ ಸಹವಾಸಕ್ಕೆ ಬಿದ್ದು ತಾನು ಬಂದಿರುವ ಮುಖ್ಯ ಉದ್ದೇಶವನ್ನೇ ಮರೆತಿದ್ದನು. ತಾನು ಓದಿ ಮುಂದೆಬರಬೇಕೆನ್ನುವುದನ್ನೇ ಮರೆತು ಬಿಟ್ಟಿದ್ದನು. ಹೀಗೆ ಗೆಳೆಯರ ಜೊತೆ Party ಮಾಡುತ್ತ ಯಾವ ಪರೀಕ್ಷೆಯನ್ನೂ ಪಾಸುಮಾಡಲಾಗದೇ ಸ್ವೇಚ್ಚಾಚಾರದ ಬದುಕು ನಡೆಸಿದನು. ತನ್ನ ಮನೆಯಲ್ಲಿ ಇಬ್ಬರೂ ಕೂಲಿಗಾರರೆಂದು ತಿಳಿದಿದ್ದರೂ, ಯಾವ ಸಂಭಂದವಿಲ್ಲದಂತೆ ಅವರನ್ನು ಹಣಕ್ಕಾಗಿ ಪೀಡಿಸುತ್ತಿದ್ದನು.

          ಸರೋಜಳಾದರೂ ಯಾರನ್ನೂ ಸಂತೈಸುವ ಸ್ಥಿತಿಯಲ್ಲಿರಲಿಲ್ಲ. ತನ್ನ ಗಂಡನನ್ನು ಹೇಗೋ ಸಮಾಧಾನಿಸಿದಳು. ಒಂದು ಹೊತ್ತು ಮಾತ್ರ ಊಟ ಮಾಡಿ, ಮಿಕ್ಕ ಹಣವನ್ನು ಮಗನಿಗೋಸ್ಕರ ಕಳುಹಿಸತೊಡಗಿದರು. ಮುಂದಾದರೂ ತಮ್ಮ ಮಗ ಸರಿಹೋದಾನು ಎಂಬ ಹುಚ್ಚುನಂಬಿಕೆ ಅವರಲ್ಲಿ. ಮಗನ ಎಲ್ಲ ಚಟುವಟಿಕೆಗಳು ಗೊತ್ತಿದ್ದರೂ, ಈ ವಿಷಯ ಮಗನಿಗೆ ಗೊತ್ತಾದರೆ ಅವನ ಓದಿಗೆ ತೊಂದರೆಯಾಗಬಹುದೆಂಬ ಭಯದಿಂದೆ ಎಲ್ಲ ನೋವನ್ನೂ ತಮ್ಮ ಹೊಟ್ಟೆಗೆ ಹಾಕಿಕೊಂಡು ಕಷ್ಟದ ಬದುಕನ್ನು ನಡೆಸಿದರು.

          ತನ್ನ ಎಡೆಬಿಡದ ಕೆಲಸದಿಂದ ಸುಸ್ತಾಗಿ ಹಾಸಿಗೆ ಹಿಡಿದ ಗಂಡನನ್ನು ನೋಡಿ ಸರೋಜಳಿಗೆ ದಿಕ್ಕೇ ತೋಚದಂತಾಯಿತು. ಇದ್ದುದರಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ಆಸ್ಪತ್ರೆಗೆ ಹೋದರೆ, ಇಷ್ಟು ಹಣ ಸಾಲದೆಂಬಂತೆ ವೈದ್ಯರು ವರ್ತಿಸಿದ ರೀತಿಯನ್ನು ನೋಡಿ ಒಮ್ಮೆ ದಂಗಾದಳು. ಊರಿನವರಿಂದ ಹೇಗೋ ಹಣವನ್ನು ಹೊಂದಿಸಿಕೊಂಡು ಚಿಕಿತ್ಸೆ ಕೊಡಿಸಿದಳು. ಮನೆಗೆ ಕರೆದುಕೊಂಡು ಬಂದು, ಮನೆಯಲ್ಲಿಯೇ ತನಗೆ ತಿಳಿದಿರುವಷ್ಟು ಶುಶ್ರೂಷೆ ಮಾಡಿ ಉಪಚರಿಸಿದಳು. ಊರಿನವರು ಬಂದು ಸಮಾಧಾನಿಸಿ, ಮಗನಿಗೆ ತಿಳಿಸಲು ಹೇಳಿದರೆ, ಮಗನ ಕೆಟ್ಟ ನಡತೆಗಳನ್ನು ತಿಳಿದಿದ್ದರೂ, ಅವನ ಓದಿಗೆ ತೊಂದರೆಯಾದೀತು ಎಂದು ಕಷ್ಟದಿಂದಲೇ ಹೇಳಿದಳು. ಸರೋಜಳ ಈ ಮಾತಿಗೆ ಏನನ್ನೂ ಮಾತನಾಡದೇ ಅವರು ಸುಮ್ಮನಾಗಿಬಿಟ್ಟರು. ತಾಯಿ ತನ್ನ ಮಗನ ಓದಿಗೆ ತೊಂದರೆಯಾಗಬಾರದೆಂದು ಕಷ್ಟಗಳನ್ನೆಲ್ಲ ತನ್ನಲ್ಲೇ ಅಡಗಿಸಿಟ್ಟುಕೊಂಡಿದ್ದನ್ನು ನೋಡಿದ ಜನ ಮಾತೇ ಹೊರಡದವರಂತಾದರು. ತನ್ನ ಗಂಡನ ಪರಿಸ್ಥಿತಿ ಮಿತಿಮೀರುತ್ತಿದೆಯೆಂದು ತಿಳಿದು ಮಗನಿಗೆ ತಿಳಿಸಿದರೆ, ನಾನು ಮುಂದಿನ ವಾರ ಬರುವುದಾಗಿಯೂ, ನನಗೆ Motor-Cycle ಕೊಳ್ಳಲು ಬೇಗನೆ ಹಣ ಕಳುಹಿಸಿಕೊಡುವುದಕ್ಕೂ ಹೇಳಿದನು. ಅಲ್ಲದೇ ಹಣ ಕಳುಹಿಸದಿದ್ದರೆ ಮನೆಗೇ ಬರುವುದಿಲ್ಲವೆಂದೂ ಸ್ಪಷ್ಟವಾಗಿ ಹೇಳಿದನು. ಮಗನು ಕೆಟ್ಟು ಹೋಗಿರುವುದನ್ನು ತಿಳಿದಿದ್ದ ಸರೋಜಳು ಮಗನ ಈ ಕಠೋರ ನುಡಿಗಳನ್ನು ಕೇಳಿ ಮೌನಿಯಾಗಿ ಮಗನ ಬಗ್ಗೇ ಯೋಚಿಸತೊಡಗಿದಳು. ದುಃಖಿತಳಾಗಿ ಗಂಡನ ಪಾದದಲ್ಲಿ ತಲೆಯಿಟ್ಟು ಅಳುತ್ತ ಕುಳಿತಳು. ಇದ್ಯಾವುದರ ಪರಿವೇ ಇಲ್ಲದ ಅವಳ ಗಂಡ ಜೀವಂತ ಶವವಾಗಿದ್ದನು. ಬೇರೆ ದಾರಿ ತೋಚದೇ ಅವಳು ತನ್ನ ಮಾಂಗಲ್ಯವನ್ನೇ ಮಾರಲು ನಿರ್ಧರಿಸಿದಳು. ಇದೇ ಇವೆಲ್ಲವುದಕ್ಕೂ ಪರಿಹಾರವಾಗಬಹುದೆಂದು ಯೋಚಿಸಿದಳು. ಮಾಂಗಲ್ಯವನ್ನು ಮಾರಿ ಮಗನಿಗೆ ಹಣ ಕಳುಹಿಸಿ, ಉಳಿದುದರಲ್ಲಿ ಗಂಡನಿಗೆ ಚಿಕಿತ್ಸೆ ಕೊಡಿಸಿದಳು. ತನ್ನ ಮಗ ಸರಿಯಾಗುತ್ತಾನೆಂಬ ನಂಬಿಕೆ ಅವಳಲ್ಲಿ ಅಚಲವಾಗಿತ್ತು. ಆದರೆ ಅವಳ ನಂಬಿಕೆ ಎಲ್ಲವೂ ಹುಸಿಯಾಯಿತು. ಮಗನು ಪತ್ರವೊಂದನ್ನು ಕಳುಹಿಸಿದ್ದನು. ಅದರಲ್ಲಿ " ನಾನು ಗೆಳೆಯರ ಜೊತೆಯಲ್ಲಿ ಪ್ರವಾಸಕ್ಕೆ ಹೋಗುತ್ತಿರುವುದಾಗಿಯೂ, ಮುಂದಿನವಾರ ಬರುತ್ತೇನೆಂದೂ " ಬರೆದಿದ್ದನು.

          ಒಂದು ಹೆಣ್ಣು, ತಾನು ಎಷ್ಟು ಕಷ್ಟಗಳನ್ನು ಸಹಿಸಿಕೊಂಡಾಳು ? ಉಸಿರೇ ನಿಂತಂತೆ, ಕೊನೆಗಾಲದಲ್ಲಿ ಮಗನೂ ಇಲ್ಲದಾದನೇ ಅಂದುಕೊಂಡಳು. ನನ್ನ ಕಷ್ಟವನ್ನು ಯಾರಲ್ಲಿ ಹೇಳಲಿ ? ದೇವರೇ ಈ ರೀತಿ ಆಡಿಸುತ್ತಿರುವಾಗ ನಾನೇನು ಮಾಡಲು ಸಾಧ್ಯ ? ಅಸಹಾಯಕಳಾಗಿ ನಾಳಿನ ದೀಪಾವಳಿಯನ್ನು ನೆನೆಯುತ್ತ ಕುಳಿತಳು.

          ದೀಪಾವಳಿಯ ದಿನ ಗಂಡನು ಸ್ವಲ್ಪ ಚೇತರಿಸಿಕೊಂಡಿರುವುದನ್ನು ನೋಡಿ ಸಂತೋಷಪಟ್ಟಳು. ಮನೆಯಲ್ಲೊಂದು ದೀಪಹಚ್ಚಿ ಒಬ್ಬಳೇ ಸಂಭ್ರಮಿಸಿದಳು. ನಾನೇನು ಹುಚ್ಚಿಯಾಗಿ ವರ್ತಿಸುತ್ತಿರುವಳೇ ಎಂದುಕೊಂಡಳು. ಇದ್ದುದರಲ್ಲಿ ಹಬ್ಬದ ಊಟ ಮಾಡಿ ಮುಗಿಸಿದರು. ಎಲ್ಲರೂ ಹೊರಗೆ ಸಂಭ್ರಮಿಸುತ್ತಿದ್ದರೆ, ಇಲ್ಲಿ ಮಾತ್ರ ನೀರಸ ಮೌನ. ಎಲ್ಲ ವಿಧಿಯ ಆಟ ಎಂದು ಸುಮ್ಮನಾದಳು. ಗಂಡನಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ ಸರೋಜ, ಅತಿಯಾದ ದುಃಖದಿಂದ ರೋಧಿಸತೊಡಗಿದಳು. ತನ್ನ ಮಗನು ಈ ರೀತಿಯಾಗಿ ಬದಲಾಗಿರುವುದನ್ನು ನೋಡಿ ಮೂರ್ಛಿತಳಾದಳು. ಇತ್ತ ಸರೋಜಳ ಗಂಡ ತಾನೇ ಎಲ್ಲವುದಕ್ಕೂ ಕಾರಣ ಎಂದು ತಿಳಿದು , ಇನ್ನೇನೂ ಮಾಡಲಾಗದೇ ಮುಂಜಾನೆಯಾಗುವುದರೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಆ ದೀಪಾವಳಿಯ ದೀಪವು ತಾನು ಆರುವುದರ ಜೊತೆ ಆ ಬಡ ಕುಟುಂಬವನ್ನು ಕತ್ತಲೆಯಲ್ಲಿ ಮುಳುಗಿಸಿತ್ತು.

          ತಂದೆಯ ಮರಣದ ವಿಷಯವನ್ನು, ಪ್ರವಾಸಕ್ಕೆಂದು ಹೋದ ಮಗನಿಗೆ ತಿಳಿಸಲಾಗದೇ ಹೋದಳು. ಮಗನಿಗೆ ತಿಳಿಸಿಯೂ ಪ್ರಯೋಜನವಿಲ್ಲವೆಂದುಕೊಂಡಳು. ತನ್ನ ಗಂಡನ ಮರಣಕ್ಕೆ ತನ್ನ ಮಗನೇ ನೇರ ಕಾರಣ ಎಂದು ತಿಳಿದಿದ್ದರೂ ಮಗನನ್ನು ದೂಷಿಸದೇ, ಆತನ ಬಾಲ್ಯದ ದಿನಗಳನ್ನು ನೆನೆಯುತ್ತ ತನ್ನ ದುಃಖವನ್ನು ಕಳೆಯಲೆತ್ನಿಸಿದಳು. ಈ ಕಲ್ಲಿನಂತಹ ದುಃಖ, ಚಿಕ್ಕ ಸಂತೋಷದಿಂದ ಕರಗೀತೆ ? ತನಗೂ ಈ ಜೀವನ ಸಾಕೆನ್ನುವ ತೀರ್ಮಾನಕ್ಕೆ ಬಂದಿದ್ದ ಸರೋಜ ಕುಳಿತಲ್ಲಿಯೇ ಕಣ್ಣುಮುಚ್ಚಿದ್ದಳು.

          ಪ್ರವಾಸದಿಂದ ಹಿಂತಿರುಗಿದ ಸಂದೀಪನು ತನ್ನ ಗೆಳೆಯರ ಜೊತೆಯಲ್ಲಿ ಮೋಜು-ಮಸ್ತಿಯನ್ನು ಮುಂದುವರಿಸಿದನು. ತನ್ನ ತಾಯಿ, ತಂದೆಯ ಅನಾರೋಗ್ಯದ ಬಗ್ಗೆ ಹೇಳಿರುವುದನ್ನು ಮರೆತೇ ಬಿಟ್ಟಿದ್ದನು. ತನ್ನ ಗೆಳೆಯನೊಬ್ಬ ಆತನ ತಂದೆಯ ಅನಾರೋಗ್ಯದ ನಿಮಿತ್ತ ಊರಿಗೆ ಹೋಗಿರುವುದನ್ನು ನೋಡಿ, ತಕ್ಷಣ ತನ್ನ ತಾಯಿಯ ಮಾತನ್ನು ನೆನೆಪಿಸಿಕೊಂಡು ತಾನೂ ಹೊರಡಲು ನಿರ್ಧರಿಸಿದನು. ತನ್ನ ಹೊಸ Motor-Cycle ನೊಂದಿಗೆ ಸಂತೋಷದಿಂದ ಮನೆಗೆ ಬಂದು ಅಲ್ಲಿಯೇ ಕುಳಿತಿದ್ದ ತಾಯಿಯನ್ನು ತಬ್ಬಿಕೊಂಡನು. ಆದರೆ ಆ ಹೊತ್ತಿಗಾಗಲೇ ಆತನ ತಾಯಿಯೂ ಆತ್ಮವನ್ನು ತ್ಯಜಿಸಿದ್ದಳು.

December 26, 2010

ಚುಟುಕು..

ಮುಂಜಾನೆಯ ಮಂಜಿನಲ್ಲಿ
ಹೊಂಗಿರಣಗಳ ನಡುವಲ್ಲಿ
ಕಂಡೆನೊಂದು ಕೋಗಿಲೆಯ
ಮಾಮರದ ತುದಿಯಲ್ಲಿ.

December 15, 2010

ಹನಿಗವನಗಳೊಂದಿಗೆ..,

ಹನಿಗವನ ಓದಲು ಸೊಗಸು,
ಕುಳಿತಲ್ಲೆ ಕಾಣುವರು ಕನಸು,
ಹುಡುಗ ಪಡೆದರೆ ಹುಡುಗಿಯ ಮನಸು,
ನನಸಾಗುವುದು ಅವನ ಕನಸು..

**********||*||**********

ಕವಿ ಬರೆದನು ಕವಿತೆ,
ಮೆಚ್ಚಿದವು ಜನತೆ,
ಹೊಂದಿಹಳು ಸೌಜನ್ಯತೆ,
ಭಾರತೀಯ ವನಿತೆ.

**********||*||**********

ಅವನು ಸೇದುವುದು ಸಿಗರೇಟು,
ಸೇದಿದಾಗ ಬರುವುದು ಅತಿಯಾದ ಘಾಟು,
ಕಾರಣ, ಅದರೊಳಗಿನ ನಿಕೋಟು
ಜಾಸ್ತಿಯಾದರೆ ನಿಲ್ಲುವುದು ಅವನ Heart Beat.